ಡಿಫೋ, ಡ್ಯಾನ್‍ಯಲ್
	1660-1731. ಬಹುಮುಖ್ಯ ಪ್ರತಿಭಾಶಾಲಿಯಾದ ಇಂಗ್ಲಿಷ್ ಲೇಖಕ. ರಾಜಕೀಯ ವಿಡಂಬನೆಗಳ ಮತ್ತು ಕಟ್ಟುಕತೆಗಳ ಕರ್ತೃ. ಹುಟ್ಟಿದ್ದು ಲಂಡನ್ನಿನ ಸೇಂಟ್ ಗೈಲ್ಸ್ ಪ್ಯಾರಿಷ್‍ಗೆ ಸೇರಿದ ಕ್ರಿಪ್ಲ್‍ಗೇಟ್‍ನಲ್ಲಿ. ತಂದೆ ಜೇಮ್ಸ್ ಫೋ ಕಸಾಯಿ ವೃತ್ತಿಯವ. ಮಗ ತನ್ನ ಮನೆತನದ ಫೋ ಎಂಬ ಹೆಸರನ್ನು ಡಿಫೋ ಎಂದು ಬದಲು ಮಾಡಿಕೊಂಡದ್ದು 1703ರಲ್ಲಿ. ಪಾದ್ರಿಯಾಗಿ ಕ್ರೈಸ್ತಮತ ಸೇರುವ ಉದ್ದೇಶದಿಂದ ಶಿಕ್ಷಣ ಪಡೆದನಾದರೂ ಅನಂತರ ಆ ಆಲೋಚನೆಯನ್ನು ತೊರೆದು ವ್ಯಾಪಾರವನ್ನವಲಂಬಿಸಿದ. 1678ರಿಂದ 1683ರ ವರೆಗೆ ಸ್ಪೇನಿನಲ್ಲಿ ದಳ್ಳಾಳಿ ವ್ಯಾಪಾರ ಮಾಡುತ್ತಿದ್ದು ಅದೇ ಕಾಲದಲ್ಲಿ ಫ್ರಾನ್ಸ್, ಇಟಲಿ, ದಕ್ಷಿಣ ಜರ್ಮನಿ ಮುಂತಾದೆಡೆ ಸುತ್ತಿದ. 1684ರಲ್ಲಿ ಮೇರಿ ಟಫ್ಲೆ ಎಂಬಾಕೆಯನ್ನು ಮದುವೆಯಾದ. ಮಾರನೆಯ ವರ್ಷ ಮಾನ್ಮತ್ ಬಂಢಾಯದಲ್ಲಿ ಸೇರಿಕೊಂಡಿದ್ದನೆಂಬ ಸಂಶಯದ ಮೇಲೆ ಈತನನ್ನು ಸೆರೆಹಿಡಿದರು. ಲಂಡನಿನವನೆಂದು ತಿಳಿದ ಮೇಲೆ ಪರವೂರಿನವನು, ನಿರಪರಾಧಿ ಎಂದು ಬಿಡುಗಡೆ ಮಾಡಿದರು. ಎರಡನೆಯ ಜೇಮ್ಸ್‍ನ ಬದಲು ವಿಲಿಯಮ್ ಮತ್ತು ಮೇರಿ ರಾಜ್ಯಭಾರ ಮಾಡಲೆಂದು ಇವನ ಅಪೇಕ್ಷೆ. ಅದರಂತೆ ಮೂರನೆಯ ವಿಲಿಯಮ್ ದೊರೆಯಾದ ಮೇಲೆ ಆ್ಯನ್ ರಾಣಿಯ ಮರಣದವರೆಗೂ ರಾಜಕುಟುಂಬದ ನಿಕಟವರ್ತಿಯಾಗಿದ್ದ. 

	1691ರಲ್ಲಿ ಇವನ ಮೊದಲ ಕೃತಿ-ಒಂದು ವಿಡಂಬನ ಕಾವ್ಯ-ಪ್ರಕಟವಾಯಿತು. ಕೆಲವು ವರ್ಷಗಳ ಬಳಿಕ ಲೇಖನವೃತ್ತಿಯ ಜೊತೆಗೆ ಪತ್ರಿಕೋದ್ಯಮವನ್ನೂ ಕೈಕೊಂಡ. ಸಟ್ಟಾ ವ್ಯಾಪಾರದಲ್ಲಿ ತುಂಬ ನಷ್ಟವಾಗಿ 17 ಸಾವಿರ ಪೌಂಡ್ ಸಾಲವನ್ನು ತೀರಿಸಲಾಗದೆ ದಿವಾಳಿಯಾದ. ಆದರೆ ಬಹು ಕಷ್ಟಪಟ್ಟು ಮತ್ತೆ ಹೊಸ ಕೈಗಾರಿಕೆಯೊಂದನ್ನು ಆರಂಭಿಸಿ ಸುಮಾರು 12 ಸಾವಿರ ಪೌಂಡುಗಳಷ್ಟು ಸಾಲವನ್ನು ಪ್ರಾಮಾಣಿಕವಾಗಿ ತೀರಿಸಿದ. ಟಿಲ್‍ಬರಿಯಲ್ಲಿ ಹೆಂಚಿನ ಒಂದು ಕಾರ್ಖಾನೆಯ ಮಾಲೀಕನಾದ. 

	ತನ್ನ ಲೇಖನ ಖ್ಯಾತಿಯಿಂದಲೂ ರಾಜಕೀಯ ವರ್ಚಸ್ಸಿನಿಂದಲೂ 1695ರಿಂದ 1699ವರೆಗೆ ಗ್ಲಾಸ್ ತೆರಿಗೆ ಕಮಿಷನರುಗಳ ಕಚೇರಿಯಲ್ಲಿ ಲೆಕ್ಕವಿಡುವ ಅಧಿಕಾರಿಯಾಗಿ ನೇಮಕಗೊಂಡ. ಕೆಲಸದಲ್ಲಿ ಚುರುಕು, ದಕ್ಷ ಎಂದೆನಿಸಿಕೊಂಡರೂ ಎಚ್ಚರ ಗೇಡಿತನದಿಂದ ಅನೇಕ ತಪ್ಪುಗಳನ್ನು ಮಾಡಿ ಅಲ್ಲೂ ವಿರೋಧ ಕಟ್ಟಿಕೊಂಡ.

	ದಿ ಟ್ರೂ ಬಾರ್ನ್ ಇಂಗ್ಲಿಷ್‍ಮನ್ (1701) ಎಂಬ ಈತನ ರಾಜಕೀಯ ಪುಸ್ತಿಕೆ ರಾಜನ ಪ್ರೀತಿಯನ್ನು ಗಳಿಸಿಕೊಟ್ಟಿತು. 

	1703ರಲ್ಲಿ ದಿ ಷಾರ್ಟೆಸ್ಟ್ ವೇ ವಿತ್ ದಿ ಡಿಸೆಂಟರ್ಸ್ ಎಂಬ ವಿಡಂಬನೆಯನ್ನು ಬರೆದ. ಸ್ವಿಫ್ಟ್ ಮಾಡೆಸ್ಟ್ ಪ್ರಪೋಸûಲ್ ಬರೆದು ತನಗೆ ತಾನೆ ಹಾನಿ ತಂದುಕೊಂಡಂತೆ ಡಿಫೋ ಸಹ ಈ ವಿಡಂಬನೆಯ ಕಹಿ ಫಲವನ್ನು ತಾನೇ ಉಣ್ಣಬೇಕಾಯಿತು. 15 ತಿಂಗಳ ಸೆರೆಮನೆ ವಾಸವಲ್ಲದೆ ಮರದ ಚೌಕಟ್ಟಿನಲ್ಲಿ ಬಂಧಿತನಾಗಿ ಸಾರ್ವಜನಿಕ ಸ್ಥಳದಲ್ಲಿ ನಿಲ್ಲುವ ಅಪಮಾನವನ್ನೂ ಸಹಿಸಬೇಕಾಯಿತು. ಸರ್ಕಾರಿ ದಾಖಲೆ ಪುಸ್ತಕಗಳಲ್ಲಿ ಈತನ ಎತ್ತರ, ಆಕಾರ, ಚರ್ಯೆ, ಬಣ್ಣ ಮುಂತಾದ ವಿವರಗಳನ್ನು ಬರೆದಿಟ್ಟರು. ತಪ್ಪು ದಂಡ ತೆತ್ತು ಏಳು ವರ್ಷ ಅವಧಿಯ ಸದ್ವರ್ತನೆಯ ಮುಚ್ಚಳಿಕೆ ಬರೆದುಕೊಟ್ಟಮೇಲೆ ಬಿಡುಗಡೆಯಾಯಿತು. ಮರದ ಚೌಕಟ್ಟಿನ ಬೀದಿ ಶಿಕ್ಷೆಯ ಅಪಮಾನದಿಂದ ನೊಂದ ಡಿಫೋ ನೀತಿಧ್ಯೇಯಗಳನ್ನು ಗಾಳಿಗೆ ತೂರಿದ. ಧ್ಯೇಯಕ್ಕಿಂತ ಹಣ ಮುಖ್ಯವೆಂದು ತಿಳಿದ. ತನ್ನ ಈ ಎಲ್ಲ ಅನುಭವಗಳನ್ನೂ ಹಿಮ್ ಟು ದಿ ಪಿಲೊರಿ (1704) ಎಂಬ ಕೃತಿಯಲ್ಲಿ ಅಭಿವ್ಯಕ್ತಿಸಿದ. ಇನ್ನೂ ಕೆಲವು ವಿಡಂಬನೆಗಳನ್ನು ಬರೆದು ಸ್ವಧರ್ಮೀಯರ ವಿರೋಧವನ್ನು ಮತ್ತಿಷ್ಟು ಹೆಚ್ಚಿಸಿಕೊಂಡ. ದಂಡ ತೆತ್ತು ಡಿಫೋನನ್ನು ಸೆರೆಯಿಂದ ಬಿಡಿಸಿದ ಆಕ್ಸ್‍ಫರ್ಡಿನ ಅರ್ಲ್‍ಹ್ವಿಗ್ ರಾಜಕೀಯ ಪಕ್ಷದ ಮುಂದಾಳು. ಮುಂದೆ ಆತ ರಾಜ್ಯದ ಪ್ರಧಾನಿಯೂ ಆದ. ಆತನ ಬಳಿಯೇ ಡಿಫೋ ಮೊದಲು ಗೂಢಚರ್ಯೆಯ ವೃತ್ತಿಗೆ ಸೇರಿದುದು. 1706-1707ರಲ್ಲಿ ಸ್ಕಾಟ್ಲೆಂಡಿನಲ್ಲಿ ಗೂಢಚಾರನಾಗಿ ಜಾಕೊಬೈಟರ ರಹಸ್ಯಗಳನ್ನು ಸಂಗ್ರಹಿಸತೊಡಗಿದ. 

	ಹ್ಯಾರ್ಲೆಯ ಅಧಿಕಾರ ಹೋದಮೇಲೆ ಮತ್ತೆ ಹ್ವಿಗ್ ಪಕ್ಷ ಆಡಳಿತ ವಹಿಸುವವರೆಗೂ ಡಿಫೋ ಟೋರಿ ಸರ್ಕಾರದ ಸೇವೆಯಲ್ಲಿದ್ದ. ಹ್ವಿಗ್ ಮತ್ತು ಟೋರಿ ಪಕ್ಷಗಳೆರಡೂ ಈತನ ಬುದ್ಧಿ ಸಾಮಥ್ರ್ಯಗಳನ್ನು ಬಳಸಿಕೊಂಡರೂ ಈತನನ್ನೆಂದೂ ಪೂರ್ಣವಾಗಿ ನಂಬಲಿಲ್ಲ. 

1704ರಲ್ಲಿ ಡಿಫೋ ರಿವ್ಯೂ ಎಂಬ ಪತ್ರಿಕೆಯನ್ನಾರಂಭಿಸಿದ. ಇದು ವಾರಕ್ಕೆ ಮೂರು ಬಾರಿ ಪ್ರಕಟವಾಗುತ್ತಿತ್ತು. ಸರ್ಕಾರದ ಸಹಾಯ ಪಡೆದು ನಡೆಯುತ್ತಿದ್ದ ಮಾನಿಟರ್, ವೀಕ್ಲಿ ಜರ್ನಲ್, ಡೇಯ್ಲಿ ಪೋಸ್ಟ್, ಡೈರೆಕ್ಟರ್ ಮುಂತಾದ ಇತರ ಪತ್ರಿಕೆಗಳೆಲ್ಲ ಒಂದು ರೀತಿಯಲ್ಲಿ ಡಿಫೋನ ಪತ್ರಿಕೆಗಳ ಅನಧಿಕೃತ ಅಂಗಗಳಂತೆಯೇ ಇದ್ದುವು. ಲೇಖನಕಲೆಗಳಲ್ಲಿ ಪಳಗಿ ಬಹುದೊಡ್ಡ ಕತೆಗಾರನಾಗಲು ಈ ಅನಿಶ್ಚಿತವಾದ ಪತ್ರಿಕೋದ್ಯಮ ಪೂರ್ವಸಿದ್ಧತೆಯಾಯಿತು. 

ದಿ ರೀಸನ್ಸ್ ಎಗೇನ್ಸ್ಟ್ ದಿ ಸಕ್ಸೆಷನ್ ಆಫ್ ದಿ ಹೌಸ್ ಆಫ್ ಹ್ಯಾನೋವರ್ ಎಂಬ ವಿಡಂಬನೆ ಲೇಖನದಿಂದಾಗಿ 1713ರಲ್ಲಿ ಈತ ಮತ್ತೆ ತೊಂದರೆಗೆ ಸಿಕ್ಕಿಕೊಂಡ. 

ರಿವ್ಯೂ ಪತ್ರಿಕೆಯಲ್ಲಿ ನ್ಯಾಯಾಧೀಶರ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡಿ ನ್ಯಾಯಾಲಯಕ್ಕೆ ಅಗೌರವ ತೋರಿದನೆಂಬ ಆಪಾದನೆಯ ಮೇಲೆ ಡಿಫೋ ಅಲ್ಪಾವಧಿ ಸೆರೆವಾಸ ಮಾಡಬೇಕಾಯಿತು. 

ಆ್ಯನ್ ಮಹಾರಾಣಿ ಸತ್ತ ಕೂಡಲೆ ಡಿಫೋ ಅಸ್ವಸ್ಥತೆಯ ನೆಪವೊಡ್ಡಿ ಸಾರ್ವಜನಿಕ ಕ್ಷೇತ್ರದಿಂದ ಮರೆಯಾದ. 1716-26ರ ಅವಧಿಯಲ್ಲಿ ಹ್ವಿಗ್ ಪಕ್ಷದ ಗೂಢಚಾರನಾದ. ಜಾಕೋಬೈಟರ ಮಿಸ್ಟ್ ಎಂಬಾತ ನಡೆಸುತ್ತಿದ್ದ ಪತ್ರಿಕೆಯ ಸಂಪಾದಕನಾಗಿ ಒಳಗಿಂದೊಳಗೆ ಜಾಕೋಬೈಟ್ ರಾಜಕೀಯ ಪ್ರಭಾವವನ್ನು ತಗ್ಗಿಸುವ ಮತ್ತು ಅವರ ರಹಸ್ಯ ಚಟುವಟಿಕೆಗಳ ಬಗ್ಗೆ ಗುಟ್ಟಾಗಿ ವರದಿ ಮಾಡುವ ಕಾರ್ಯದಲ್ಲಿ ನಿರತನಾದ. ಇವನ ಗೂಢಚರ್ಯೆಯ ಪರಿಣಾಮವಾಗಿ ಮಿಸ್ಟ್ ಸೆರೆಮನೆ ಸೇರಬೇಕಾಯಿತು. 
ಈ ವೃತ್ತಿಯಲ್ಲಿದ್ದರೂ ಬಿಡುವಿನ ಕಾಲದಲ್ಲಿ ಸತತವಾಗಿ ಡಿಫೊ ಪುಸ್ತಕಗಳನ್ನು ಬರೆಯುತ್ತಲೇ ಇದ್ದ. ಸಣ್ಣ ಪುಟ್ಟ ಪುಸ್ತಿಕೆಗಳೂ ಸೇರಿ ಸುಮಾರು 250 ಪುಸ್ತಕಗಳನ್ನು ಈತ ಬರೆದಿರುವನೆಂದು ತಿಳಿದುಬಂದಿದೆ. ಅವುಗಳಲ್ಲಿ ಬಹುಪಾಲು ರಾಜಕೀಯಕ್ಕೆ ಸಂಬಂಧಿಸಿದವು. ಇವುಗಳಲ್ಲಿ ತುಂಬಾ ಉತ್ಕøಷ್ಟವಾದ ಆರು ಪುಸ್ತಕಗಳು ಇದ್ದುವೆಂದೂ ಆದರೆ ಅವು ಅಷ್ಟೊಂದು ಪುಸ್ತಕಗಳ ಗೊಂದಲದಲ್ಲಿ ಕಳೆದುಹೋದುವೆಂದು ಹೇಳುತ್ತಾರೆ. 

1729ರಲ್ಲಿ ಡಿಫೋ ಇದ್ದಕ್ಕಿದಂತೆ ಸ್ಟೋಕ್ ನ್ಯೂಯಿಂಗ್ಟನ್ನಿನಿಂದ ತಲೆತಪ್ಪಿಸಿಕೊಂಡು ಲಂಡನ್ನಿನ ಮಹಾ ಜನಸಮುದ್ರದಲ್ಲಿ ಕಾಣದಾದ. ಮಿಸ್ಟ್‍ನ ಸೇಡಿನ ಭಯವೋ ಹಣದ ತೊಂದರೆಯೋ ಮಗನ ವಂಚನೆಯೋ ಬುದ್ಧಿ ವಿಕಲ್ಪವೋ ಯಾರಿಗೂ ತಿಳಿಯದು. ರಾಜಕಾರಣಿಗಳೊಡನೆ ವಿರಸವುಂಟಾದುದಂತೂ ನಿಜ. 

ಕಟ್ಟಕಡೆಯ ತನ್ನ ಕೃತಿಗಳನ್ನು ಡಿಫೋ ಆಂಡ್ರ್ಯೂ ಮಾರ್‍ಟನ್ ಎಂಬ ಸಾಹಿತ್ಯ ನಾಮದಲ್ಲಿ ಇಲ್ಲವೆ ಅನಾಮಿಕವಾಗಿ ಪ್ರಕಟಿಸಿದ. 
1731ರಲ್ಲಿ ಸೇಂಟ್ ಗೈಲ್ಸ್‍ನಲ್ಲಿ, ತನ್ನ ಜನ್ಮಸ್ಥಳಕ್ಕೆ ತುಂಬ ಸಮೀಪದಲ್ಲೇ ಮಿದುಳಿನ ರಕ್ತಸ್ರಾವದಿಂದ ಡಿಫೋ ಮರಣ ಹೊಂದಿದ. ಆಗ ಈತನ ಸಂಸಾರದಲ್ಲಿ ಉಳಿದವರು ಹೆಂಡತಿ ಮತ್ತು ಏಳು ಜನ ಮಕ್ಕಳು. ಬರ್ನ್‍ಹಿಲ್ ಬಯಲಿನಲ್ಲಿ ಈತನನ್ನು ಸಮಾಧಿ ಮಾಡಿದರು. 

ಡಿಪೋ ಶ್ರೀಸಾಮಾನ್ಯರಲ್ಲಿ ಬೆಳೆದು ನಿಂತ ಮಹಾ ಪ್ರತಿಭಾಶಾಲಿ, ಇಂಗ್ಲಿಷ್ ಕಾದಂಬರಿ ಪ್ರಕಾರದ ಆದ್ಯ ಪ್ರವರ್ತಕ. ಪ್ರತಿಕೋದ್ಯಮದ ಜನಕ. ಮುಂದೆ ಅಡಿಸನ್ ಮತ್ತು ಸ್ಟೀಲ್ ಎಂಬ ಮಿತ್ರು ನಡೆಸಿದ ಸ್ಪೆಕ್ಟೇಟರ್ ಮತ್ತು ಟ್ಯಾಟ್ಲರ್ ಜನಪ್ರಿಯ ಪತ್ರಿಕೆಗಳಿಗೆ ಮೂಲಸ್ಫೂರ್ತಿ ಡಿಫೋನ ಪತ್ರಿಕೆ-ರಿವ್ಯೂ. ವಿಡಂಬನ ಪ್ರತಿಭೆಯಲ್ಲಿ ಡಿಫೋ ಸ್ವಿಪ್ಟ್‍ಗೆ ಸರಿಸಮನಾದವ. ಸಾಹಿತ್ಯದಲ್ಲಿ ಈತ ತನ್ನದೇ ಆದ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದ. ಸರಳವಾದ ಹಾಗೆಯೆ ಅಮೋಘವಾದ ಸೂತ್ರ ರೂಪದ ಶೈಲಿ ಈತನದು. ಸ್ವಲ್ಪವೂ ಶ್ರಮವಿಲ್ಲದೆ ಸುಲಲಿತವಾಗಿ ಹರಿಯುವ ಈತನ ವಾಕ್ಯಸರಣಿಯಲ್ಲಿ ಮಾತಿನಲ್ಲಿ ಚುರುಕು, ಶಕ್ತಿ ಇವೆ. 
ಬರೆದ ಕತೆಗಳೆಲ್ಲ ನಡೆದ ಸಂಗತಿಗಳ ಆಧಾರದ ಮೇಲೆ ಕಲ್ಪನೆಯಿಂದ ಸೃಜಿಸಿದ ಕಟ್ಟುಕತೆಗಳು. ಡಿಫೋನ ಜೀವನ ಅನೇಕ ಘಟನೆಗಳೂ ಅನುಭವಗಳೂ ಇವುಗಳಲ್ಲಿ ಸೇರಿವೆ. ಕ್ಯಾಪ್ಟನ್ ಜ್ಯಾಕ್, ಮೋಲ್ ಫ್ಲ್ಯಾಂಡರ್ಸ್, ಜನದನ್ ವೈಲ್ಡ್, ರೋಕ್ಸಾನಾ ಮುಂತಾದ ಪಾತ್ರಗಳೆಲ್ಲ ವಾಸ್ತವ ಲೋಕದಿಂದ ಎತ್ತಿಕೊಂಡು ಚಿತ್ರಿಸಿದವು. ನಿಜಜೀವನದಲ್ಲಿ ಕಂಡ ಅಲೆಕ್ಸಾಂಡರ್ ಸೆಲ್‍ಕರ್ಕ್‍ನೇ (1676-1721) ರಾಬಿನ್ಸನ್ ಕ್ರೂಸೋ ಕತೆಯ ಸಾಹಿಸಿ ನಾಯಕ. ಒಂದು ನೈತಿಕ, ಧಾರ್ಮಿಕ ವ್ಯವಸ್ಥೆಯ ನಿರ್ಮಾಣವೇ ಡಿಫೋನ ಗುರಿಯಾಗಿತ್ತು. ಕೇವಲ ಮನೋರಂಜನೆಯಲ್ಲ. ರಾಬಿನ್ಸನ್ ಕ್ರೂಸೋ ಕಾದಂಬರಿಯ ಉತ್ತರಾರ್ಧವೆಲ್ಲ ಬೋಧನಮಯವಾಗಿದೆ. ಈಚಿನ ಮುದ್ರಣಗಳಲ್ಲಷ್ಟೆ ಆ ಭಾಗವನ್ನು ತೆಗೆದುಹಾಕಿದ್ದಾರೆ. 

ರಾಬಿನ್ಸನ್ ಕ್ರೂಸೊ ಡಿಫೋನ ಮೊಟ್ಟಮೊದಲ ಮತ್ತು ಅತ್ಯಂತ ಶ್ರೇಷ್ಠ ಕಾದಂಬರಿ. ಡಿಫೋನ ಹೆಸರು ಹೇಳಿದ ಕೂಡಲೆ ರಾಬಿನ್ಸನ್ ಕ್ರೂಸೊ ಕತೆಯನ್ನು ಬರೆದವನು ಎಂದು ಇಂಗ್ಲಿಷ್ ವಾಚಕರೆಲ್ಲ ತಿಳಿಯುತ್ತಾರೆ. ಆತ ಬರೆದದ್ದು ಅದೊಂದೇ ಕೃತಿ ಎಂಬಷ್ಟರಮಟ್ಟಿಗೆ ಅದರ ಖ್ಯಾತಿ ಲೋಕದಲ್ಲಿ ಹರಡಿದೆ. 

	ದಿ ಲೈಫ್ ಅಂಡ್ ಸ್ಟ್ರೇಂಜ್, ಸರ್‍ಪ್ರೈಜಿಂಗ್ ಅಡ್ವೆಂಚರ್ಸ್ ಆರ್ಫ ರಾಬಿನ್ಸನ್ ಕ್ರೂಸೊ ಆಫ್ ಯಾರ್ಕ್, ಮ್ಯಾರಿನರ್ ಎಂದು ಇಷ್ಟುದ್ದದ ಶಿರೋನಾಮೆಯಲ್ಲಿ ಈ ಪುಸ್ತಕ 1719ರಲ್ಲಿ ಪ್ರಕಟವಾಯಿತು. ಅನಂತರ ಇದರ ಎರಡನೆ ಮತ್ತು ಮೂರನೆಯ ಭಾಗಗಳು ಕ್ರಮವಾಗಿ ಫಾರ್ದರ್ ಅಡ್ವೆಂಚರ್ಸ್ ಆಫ್ ರಾಬಿನ್ಸನ್ ಕ್ರೂಸೊ ಮತ್ತು ಸೀರಿಯಸ್ ರಿಫ್ಲೆಕ್ಷನ್ಸ್ ಡ್ಯೂರಿಂಗ್ ದಿ ಲೈಫ್ ಅಂಡ್ ಸಪ್ರ್ರೈಜಿಂಗ್ ಅಡ್ವೆಂಚರ್ಸ್ ಆರ್ಫ ರಾಬಿನ್ಸನ್ ಕ್ರೂಸೊ ಎಂಬ ಹೆಸರುಗಳಲ್ಲಿ 1720ರಲ್ಲಿ ಪ್ರಕಟವಾದವು. ಈಗ ಈ ಮೂರು ಭಾಗಗಳನ್ನು ಸಂಗ್ರಹಿಸಿ ರಾಬಿನ್ಸನ್ ಕ್ರೂಸೊ ಎಂದು ಹ್ರಸ್ವನಾಮದಲ್ಲಿ ಪ್ರಕಟಿಸಿದ್ದಾರೆ. ಜಗತ್ತಿನ ಶ್ರೇಷ್ಠ ಕೃತಿಗಳಲ್ಲಿ ಒಂದು ಎಂದು ವಿಮರ್ಶಕರು ಈ ಪುಸ್ತಕವನ್ನು ಹೊಗಳಿದ್ದಾರೆ. ನಡೆದ ಒಂದು ಘಟನೆಗೆ ಕಲ್ಪನೆಯ ಬಣ್ಣ ಕಟ್ಟಿ ಕಾದಂಬರಿಯೊಂದನ್ನು ಡಿಫೋ ಬರೆದನಾದರೂ ಅಲ್ಲಿನ ಇಡೀ ಕತೆ ನಡೆದ ಸಂಗತಿಯಷ್ಟೇ ನೈಜವಾಗಿ ಬಂದಿದೆ. ಹಡಗು ಒಡೆದುಹೋದಾಗ ಕ್ರೂಸೋ ಜನವಿಹೀನವಾದ ದ್ವೀಪವೊಂದನ್ನು ಸೇರಿ ಅಲ್ಲಿ ಬದುಕಲು ಹೆಣಗಾಡಿದ ಸನ್ನಿವೇಶಗಳ ವರ್ಣನೆ ಮನವೊಪ್ಪುವಂತೆ ನಿರೂಪಣೆಗೊಂಡಿದೆ. ಈ ಕಾದಂಬರಿಯನ್ನು ಬರೆದಾಗ ಡಿಫೋಗೆ 60 ವರ್ಷ ವಯಸ್ಸಾಗಿತ್ತು. ಒಡೆದು ಹೋದ ಹಡಗಿನಲ್ಲಿ ಅಳಿದುಳಿದ ವಸ್ತುಗಳಿಂದಲೇ ಕ್ರೂಸೋ ಮನೆಕಟ್ಟಿಕೊಳ್ಳುವುದು, ಕಾಡು ಮೇಕೆಗಳನ್ನು ಸಾಕುವುದು, ದೋಣಿ ತಯಾರು ಮಾಡುವುದು-ಮೊದಲಾದ ಸನ್ನಿವೇಶಗಳನ್ನು ಬಹು ಸೂಕ್ಷ್ಮವಾಗಿ ಕಾದಂಬರಿ ಚಿತ್ರಿಸುತ್ತದೆ. ನರಭಕ್ಷಕ ಜನರ ದಾಳಿ, ಫ್ರೈಡೆಯ ಪ್ರಾಣರಕ್ಷಣೆ, ಕೊನೆಯದಾಗಿ ಅಲ್ಲಿಗೆ ಬಂದ ಒಂದು ಇಂಗ್ಲಿಷ್ ಹಡಗಿನಲ್ಲಿ ಕ್ರೂಸೋನ ಬಿಡುಗಡೆ-ಹೀಗೆ ಕತೆ ಮುಂದುವರಿಯುತ್ತದೆ. 

	ನಿಸರ್ಗಕ್ಕೆದುರಾಗಿ ನಿಂತು ಏಕಾಏಕಿಯಾಗಿ ಹೋರಾಡುವ ನಾಗರಿಕನೋರ್ವನನ್ನು ಕುರಿತ ಮಹಾಕಾವ್ಯ ಎಂದು ಈ ಕೃತಿ ಅನುವಾದಗೊಂಡಿದೆ. 

	ಈತನ ಎ ನ್ಯೂ ವಾಯೇಜ್ ರೌಂಡ್ ದಿ ವಲ್ರ್ಡ್ (1725) ಎಂಬ ಕೃತಿಯೂ ತುಂಬ ಜನಪ್ರಿಯವಾಯಿತು. 

	ಆದರೆ ನಿಜಕ್ಕೂ ಡಿಫೋನ ಪುಸ್ತಕಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದುದು ಟೂರ್ ಡಿ ಪೋರ್ಸ್ ಎ ಜರ್ನಲ್ ಆಫ್ ದಿ ಪ್ಲೇಗ್ ಇಯರ್ (1722) ಎಂಬ ಕೃತಿ. ಲಂಡನ್ನಿನಲ್ಲಿ ಪ್ಲೇಗ್ ಹರಡಿದಾಗಿನ ಅನುಭವಗಳೇ ಈ ಕತೆಯ ವಸ್ತು. ಈ ಅನುಭವಗಳನ್ನು ಆರು ವರ್ಷದ ಬಾಲಕನೊಬ್ಬ ಹೇಳುತ್ತಿರುವಂತೆ ಕಥಾ ತಂತ್ರ. ನೂರಾರು ವರ್ಷಗಳ ಹಿಂದೆ ನಡೆದ, ಸಂಗತಿಗಳನ್ನು ಡಿಫೋ ಪ್ರತ್ಯಕ್ಷದರ್ಶಿ ವರದಿ ಮಾಡುವಷ್ಟು ನೈಜವಾಗಿ ವಿವರವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾನೆ. ಐತಿಹಾಸಿಕ ಸತ್ಯ ಸಂಗತಿಗಳ ಹಂದರದ ಮೇಲೆ ರಕ್ತ ಮಾಂಸಗಳಿಂದ ಮೈಗೂಡಿಕೊಂಡು ಜೀವಂತವಾಗಿ ಕತೆ ನಿಲ್ಲುವಂತೆ ರೂಪಿಸಿರುವ ಡಿಫೋನ ಕಲ್ಪನಾಸಾಮಥ್ರ್ಯ, ಸೃಜನಶಕ್ತಿ ಅಸಾಧಾರಣವಾದವು. ಇಷ್ಟೊಂದು ಸಂಖ್ಯೆಯ ಘಟನೆಗಳನ್ನು ನೆನಪಿಟ್ಟುಕೊಂಡು, ಅತಿರೇಕರಹಿತವಾಗಿ, ವಿವರ ವಿವರವಾಗಿ ಹೇಳುವುದು ಆರು ವರ್ಷದ ಬಾಲಕನಿಗೆ ಸಾಧ್ಯವೇ ಎಂಬೊಂದು ಆವಾಸ್ತವತೆಯನ್ನು ಬಿಟ್ಟರೆ ಇಡೀ ಕತೆ ಬೇರೆ ಯಾವ ಸಂದೇಹಕ್ಕೂ ಎಡೆಗೂಡದಷ್ಟು ವಾಸ್ತವವಾಗಿದೆ. ಇಂಥದೇ ಪ್ರತಿಭೆಯಿಂದ ಸೃಷ್ಟಿಯಾದ ಇನ್ನೊಂದು ಸ್ಮರಣೀಯ ಕೃತಿ, ಆ್ಯಪರಿಷನ್ ಆಫ್ ಮಿಸೆಸ್ ವೀಲ್ ಎಂಬ ದೆವ್ವದ ಕತೆ. ಯಥಾಪ್ರಕಾರ ನಡೆದ ಸಂಗತಿಯನ್ನೇ ತೆಗೆದುಕೊಂಡು ಡಿಫೋ ತನ್ನ ಕಲ್ಪನೆಯಲ್ಲಿ ಪುನರ್ನಿರ್ಮಾಣ ಮಾಡಿದ ಕತೆಯಿದು. ಡಿಫೋಗೆ ದೆವ್ವಗಳಲ್ಲಿ ನಂಬಿಕೆ ಹಾಗೂ ಅವುಗಳು ಕಾಣಿಸಿಕೊಳ್ಳುವುದರ ಬಗ್ಗೆ ಆಸಕ್ತಿ ಇದ್ದುದರಿಂದ ಕತೆಗೆ ಇನ್ನಷ್ಟು ಜೀವಕಳೆ ಬಂದಿದೆ. ಡಾಕ್ಟರ್ ಜಾನ್ಸನ್ನನ ದಿ ಕಾಕ್‍ಲೇನ್ ಘೋಸ್ಟ್ ಎಂಬ ದೆವ್ವದ ಕತೆಯಷ್ಟೇ ಅಗಾಧ ಪರಿಣಾಮವನ್ನು ಈ ಕತೆ ಮನಸ್ಸಿನ ಮೇಲೆ ಮಾಡುತ್ತದೆ. 

	ಡಕಾಯಿತರ ಮತ್ತು ಬೆಡಗುಗಾರ್ತಿಯರ ವ್ಯಕ್ತಿಚಿತ್ರಣದಲ್ಲಿ, ಲಂಡನ್ನಿನ ಪ್ಲೇಗ್ ಕತೆ ಹೇಳುವಲ್ಲಿ ಡಿಫೋನ ಶ್ರೇಷ್ಟ ಕಲೆಗಾರಿಕೆ ವ್ಯಕ್ತವಾಗುತ್ತದೆ. ಈತನ ಕತೆಗಳೆಲ್ಲ ವಾಸ್ತವತೆಗೆ, ನೈಜತೆಗೆ ಹೆಸರಾಗಿವೆ. ಉದ್ದಕ್ಕೂ ಸ್ವಾರಸ್ಯವಾಗಿರುವ ಕಥನ ಶೈಲಿಯಿಂದಾಗಿ ಸಣ್ಣಪುಟ್ಟ ವಿವರಗಳ ವರ್ಣನೆ ಎಲ್ಲೂ ಬೇಸರ ತರುವುದಿಲ್ಲ. ಸೂಕ್ಷ್ಮ ಅವಲೋಕನಾಶಕ್ತಿಯೊಂದಿಗೆ ಅಮೋಘವಾದ ಕಲ್ಪನಾಸಮಥ್ರ್ಯ ವಿಸ್ಮಯಕರವಾಗಿ ಹೊಂದಿಕೊಂಡಿರುವ ಮತ್ತೊಂದು ನಿದರ್ಶನ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ವಿಫ್ಟನ ಹೊರತಾಗಿ ಮತ್ತಾರಲ್ಲಿಯೂ ದೊರೆಯುವುದಿಲ್ಲ, ಮಾಲ್ ಫ್ಲ್ಯಾಂಡರ್ಸ್ ದಲಿತ ಜೀವನವನ್ನು ಕುರಿತು ಒಂದು ಶ್ರೇಷ್ಟ ಕತೆ. ಇಲ್ಲಿಯೂ ಜೀವನ ನೈಜವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ. ಚಿಕ್ಕಂದಿನ ವಿದ್ಯಾಗುರು ಮಾರ್‍ಟನ್ ಹಾಗೂ ಜಾನ್ ಬನ್ಯನ್ನನ ಬರೆಹಗಳು, ಇಂಗ್ಲಿಷ್ ಬೈಬಲ್ ಮತ್ತು ಆ ಕಾಲದಲ್ಲಿ ಚರ್ಚ್ ವೇದಿಕೆಗಳಿಂದ ಮಾಡಿದ ಅಮೋಘವಾದ ಪ್ರವಚನಗಳು ಡಿಫೋನ ಭಾಷೆ ಮತ್ತು ಶೈಲಿಗಳನ್ನು ರೂಪಿಸಿರಬೇಕು. 
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ